ರಾಜಸೂಯ
ಸಾಮ್ರಾಟ ಪದವಿಗೇರಲು ಯೋಗ್ಯನಾದ ರಾಜ ಮಾಡುತ್ತಿದ್ದ ಒಂದು ವಿಶೇಷವಾದ ಯಾಗ. ಮುಖ್ಯವಾಗಿ ಇದು ಕ್ಷತ್ರಿಯರು ಮಾಡುವ ಯಾಗವಾಗಿದ್ದು ಯಾಗಗಳಲ್ಲಿ ಇದೇ ಶ್ರೇಷ್ಠವೆಂದು ಪರಿಗಣಿತವಾಗಿದೆ. ಎರಡು ವರ್ಷಗಳಿಗೂ ಮೇಲ್ಪಟ್ಟು ಈ ಯಾಗದ ಆಚರಣೆ ನಡೆಯುತ್ತದೆ. ಬೃಹದಾರಣ್ಯಕದಲ್ಲಿ ಹೇಳಿರುವಂತೆ ಸೋಮ ಕ್ಷತ್ರಿಯ. ಈತ ತನ್ನ ಮಾವ ವಿಧಿಸಿದ ಶಾಪ ವಿಮೋಚನೆಗಾಗಿ ರಾಜಸೂಯವನ್ನು ಆಚರಿಸಿದ. ರೋಹಿಣಿಯ ಮೋಹದಲ್ಲಿ ಸೋಮ ತನ್ನ ಉಳಿದ 26 ಜನ ಪತ್ನಿಯರನ್ನು ಉಪೇಕ್ಷಿಸಿದ. ಇದನ್ನು ಕಂಡ ಪತ್ನಿಯರು ಅಸೂಯಾಪರರಾಗಿ ತಮ್ಮ ತಂದೆಗೆ ತಿಳಿಸಿದರು. ಸಿಟ್ಟಿಗೆದ್ದ ದಕ್ಷಮುನಿ ಸೋಮನಿಗೆ ಮಕ್ಕಳಾಗದಂತೆ ಶಾಪಕೊಟ್ಟ. ಇದರಿಂದ ನೊಂದ ಸೋಮನ ಹೆಂಡತಿಯರು ಇಷ್ಟೊಂದು ಕಠಿಣವಾದ ಶಾಪ ಕೊಡಬಾರದೆಂದು ತಂದೆಯನ್ನು ಬಿನ್ನವಿಸಿಕೊಂಡು ಶಾಪವಿಮೋಚನೆಗಾಗಿ ಬೇಡಿದರು. ಕೊಟ್ಟ ಶಾಪವನ್ನು ಹಿಂದೆಗೆದುಕೊಳ್ಳಲು ಸಾಧ್ಯವಾಗದೆ ದಕ್ಷನು ಶಾಪವಿಮೋಚನೆಗೆ ಪರಿಹಾರ ಯೋಚಿಸಿದ. ರಾಜಸೂಯ ಯಾಗವನ್ನು ಮಾಡುವುದರಿಂದ ಶಾಪ ವಿಮೋಚನೆಯಾಗುವುದೆಂದು ಸೂಚಿಸಿದ. ಯಾಗದ ಪೂರ್ವದಲ್ಲಿ ವಿರೋಧಿ ರಾಜರು ಇರುವಂತಿಲ್ಲ; ಈ ಕಾರಣಕ್ಕಾಗಿ ಯುದ್ಧ ಮಾಡಿ ಎಲ್ಲರ ಅಧಿಪತಿಯಾಗಬೇಕು. ಸೋಮ ಬೃಹಸ್ಪತಿಯನ್ನು ಯುದ್ಧದಲ್ಲಿ ಸೋಲಿಸಿ ಆತನ ಹೆಂಡತಿ ತಾರಾಳನ್ನು ಹೊತ್ತುತಂದ. ಮುಂದೆ ಈಕೆಯಿಂದ ಪುತ್ರಸಂತಾನವಾಗಿ ಬುದ್ಧನೆಂಬ ಮಗನನ್ನು ಪಡೆದ. ಬ್ರಹ್ಮನ ರಾಯಭಾರದಲ್ಲಿ ಬೃಹಸ್ಪತಿ ತನ್ನ ಹೆಂಡತಿ ತಾರಾಳನ್ನು ಮತ್ತೆ ಪಡೆದ.

ಕೃತಯುಗದಲ್ಲಿ ಹರಿಶ್ಚಂದ್ರ ಮಹಾರಾಜ ಸಕಲ ಭೂಮಂಡಲವನ್ನು ಜಯಿಸಿ ರಾಜಸೂಯ ಮಾಡಿದ. ರಾಜ ವಿರೋಧಿಯಾಗಿದ್ದ ಶುನಶ್ಯೇಪನನ್ನು ಹರಿಶ್ಚಂದ್ರ ಯಾಗಕ್ಕೆ ಬಲಿನೀಡಿದ ಎಂಬ ವಾದವೂ ಇದೆ. ಮಕ್ಕಳ ಭಾಗ್ಯವನ್ನುಪಡೆಯುವ ಸಲುವಾಗಿಯೂ ಹರಿಶ್ಚಂದ್ರ ರಾಜಸೂಯ ಯಾಗವನ್ನು ಮಾಡಿದ.

ಪಾಂಡುರಾಜನ ಮಗ ಧರ್ಮರಾಯ ಸಮಸ್ತ ಭೂಮಂಡಲವನ್ನು ಜಯಿಸಿದ ಮೇಲೆ ಕೃಷ್ಣನ ಒಪ್ಪಿಗೆಯ ಮೇಲೆ ಶಾಸ್ತ್ರೋಕ್ತವಾಗಿ ರಾಜಸೂಯವನ್ನು ಕೈಗೊಂಡ. ಜರಾಸಂಧ ಮತ್ತು ಶಿಶುಪಾಲರು ಈ ಯಾಗಕ್ಕೆ ಅಡ್ಡಿಪಡಿಸಿದಾಗ ಅವರನ್ನು ನಿಗ್ರಹಿಸಲಾಯಿತು. ಯಾಗಕ್ಕೆ ಬೇಕಾದ ಸಾಧನಗಳೆಲ್ಲವನ್ನೂ ಸಹದೇವನ ನೇತೃತ್ವದಲ್ಲಿ ಧೌಮ್ಯರೇ ಮುಂತಾದವರ ಹೇಳಿಕೆ ಪ್ರಕಾರ ಸಂಪಾದಿಸಲಾಯಿತು. ವ್ಯಾಸಮಹರ್ಷಿಯ ಮುಂದಾಳುತನದಲ್ಲಿ ಸಾಮವೇದ ಸ್ವರೂಪನಾದ ಸುಸಾಮನೆಂಬ ಹೆಸರುಳ್ಳವನನ್ನು ಉದ್ಗಾತೃವಾಗಿ, ಯಾಜ್ಞವಲ್ಕ್ಯನನ್ನು ಅಧ್ವರ್ಯವಾಗಿ ವಸುಕುಮಾರನಾದ ಪೈಲಮಹಾಮುನೀಶ್ವರ ಮತ್ತು ಧೌಮ್ಯರನ್ನು ಹೋತೃಗಳಾಗಿ ನಿಯಮಿಸಲಾಯಿತು. ಚಿನ್ನದ ನೇಗಿಲಿನಿಂದ ಯಾಗಭೂಮಿಯನ್ನು ಉತ್ತು ಶುದ್ಧಮಾಡಿದ ಮೇಲೆ ಧರ್ಮರಾಜ ಶಾಸ್ತ್ರೋಕ್ತವಾಗಿ ದೀಕ್ಷೆ ಧರಿಸಿದ. ಸುವರ್ಣಮಯವಾದ ಉಪಕರಣಗಳನ್ನು ಇಟ್ಟು ಜ್ಯೇಷ್ಠಾನಕ್ಷತ್ರದ ಮೊದಲನೆಯ ಪಾದದಲ್ಲಿ ಅಮಾವಾಸ್ಯಾದಿ ಪರ್ವದಲ್ಲಿ ಧರ್ಮರಾಜ ಕೃಷ್ಣಾಜಿನ ತೊಟ್ಟು ಯಾಗಕ್ಕೆ ಸಿದ್ಧನಾದ. ಈ ಯಾಗವನ್ನು ನೋಡಲು ನಾನಾ ದೇಶಗಳಿಂದ ಅರಸರು ಬಂದಿದ್ದರು. ಯಾಗಶಾಲೆ ಅನೇಕ ಧಾನ್ಯ, ಗೋರತ್ನ ಕಾಂಚನಾದಿಗಳಿಂದ ಕೂಡಿದ್ದು ಕೃಷ್ಣ ದ್ವೈಪಾಯನಾದಿ ಸರ್ವರೂ ಆಯಾ ಶಾಸ್ತ್ರಕ್ರಿಯೆಯಲ್ಲಿ ವಿಚಕ್ಷಣರಾಗಿದ್ದರು. ಈ ವೃತ್ತಾಂತ ಮಹಾಭಾರತದ ಸಭಾಪರ್ವದಲ್ಲಿ ವರ್ಣಿತವಾಗಿದೆ.    

                         (ವಿ.ಎಂ.ವಿ.)
ರಾಜಸೂಯ ಯಾಗದ ಆಚರಣೆ ಧಾರ್ಮಿಕವಾಗಿ ಕಂಡುಬಂದರೂ ಇದರ ಮುಖ್ಯ ಉದ್ದೇಶ ರಾಜಕೀಯ. ಈ ಯಾಗವನ್ನು ಮಾಡುವ ರಾಜ ತನ್ನ ರಾಜತ್ವದಿಂದ ಚಕ್ರಾಧಿಪತಿ ಎನಿಸಿಕೊಳ್ಳುವನು. ಅನಂತರ ಸಾಮ್ರಾಟನಾಗುವನು. ಹಲವಾರು ರಾಜರು ಮತ್ತು ಅವರಿಗೆ ಕಪ್ಪಕಾಣಿಕೆ ಸಲ್ಲಿಸುವ ಸಾಮಂತರು ಈತನ ಸ್ವಾಮಿತ್ವವನ್ನು ಒಪ್ಪಿಕೊಳ್ಳುವರು. ಇವರೆಲ್ಲರೂ ಯಾಗದ ಸಂದರ್ಭದಲ್ಲಿ ಉಪಸ್ಥಿತರಿದ್ದು ಯಾಗದಲ್ಲಿ ಭಾಗಿಗಳಾಗುವರು.

ಪುರಾಣದಲ್ಲಿ ಮೊದಲು ಈ ಯಾಗವನ್ನು ಆಚರಿಸಿದವನು ಸೋಮ. ರಾಜನಾದವನು ಯಜ್ಞವನ್ನು ಮಾಡಲು ಫಾಲ್ಗುಣದ ಪೂರ್ಣಿಮೆಯ ದಿನ ದೀಕ್ಷೆ ಸ್ವೀಕರಿಸುವನು. ಸೋಮನ ಆರಾಧನೆಯೊಂದಿಗೆ ಈ ಯುಗ ಪ್ರಾರಂಭವಾಗುತ್ತದೆ. ಇದಕ್ಕೆ ಪವಿತ್ರ ಎಂದು ಹೆಸರು. ಇಲ್ಲಿ ಜ್ಯೋತಿಷ್ಠೋಮದ ನಿಯಮಗಳನ್ನು ಪಾಲಿಸಲಾಗುತ್ತದೆ. ರಾಜಸೂಯದಲ್ಲಿ ಅಭಿಸೇಚನೀಯಾ ಮುಖ್ಯವಾದ ಆಚರಣೆ. ಇದನ್ನು `ಪವಿತ್ರ ಆಚರಣೆಯ ಒಂದು ವರ್ಷದ ಅನಂತರವೇ ಮಾಡಬೇಕೆಂಬ ನಿಯಮವಿದೆ. ಪವಿತ್ರ ಆಚರಣೆಯಲ್ಲಿ ಪ್ರತಿದಿನ ಒಂದರಂತೆ ಐದುದಿನಗಳ ಕಾಲ ಐದು ಬಲಿಯನ್ನು ಕೊಡಲಾಗುವುದು. ಸುನಾಸಿರೀಯ ಪರ್ವದಂದು ಇದು ಕೊನೆಗೊಳ್ಳುವುದು. ಇದಾದ ಅನಂತರ ಪಂಕವತೀಯ ಆಚರಣೆ ನಡೆಯುವುದು. ನಾಲ್ಕು ದಿಕ್ಕಿಗೂ ನಾಲ್ಕು, ಮಧ್ಯೆ ಒಂದು-ಹೀಗೆ ಐದು ಕಡೆ ಬೆಂಕಿಯ ಕುಂಡಗಳನ್ನು ಇಡುವರು; ಅಪಮಾರ್ಗ ಹೋಮವನ್ನು ಮಾಡುವರು. ಅನಂತರದಲ್ಲಿ ರತ್ನಿನಾಮ್‍ಹವಿಂಸಿ ಎಂಬ ಆಚರಣೆಯನ್ನು ಹನ್ನೆರಡು ದಿನಗಳ ಕಾಲ ಮಾಡಲಾಗುವುದು. ಇದನ್ನು ರಾಣಿ ಮತ್ತು ಅರಮನೆಯ ಕಾರ್ಯನಿರ್ವಾಹಕರು ಆಚರಿಸುವರು. ಈ ಆಚರಣೆಯಲ್ಲಿ ಇಂದ್ರ, ಅಗ್ನಿ ಅನಿಕವತ್, ಬೃಹಸ್ಪತಿ, ಅದಿತಿ, ವರುಣ, ಮಾರಿತ್, ಸವಿತೃ, ಅಶ್ವಿನಿ, ರುದ್ರ (ಅಕ್ಷಾವಾಪ ಮತ್ತು ಗೋವಿಕಾರ್ತ), ಅಗ್ನಿ, ನಿಋತಿ ಇವರನ್ನು ಪೂಜಿಸುವರು. ಅನಂತರ ಅಭಿಸೇಚನೀಯಾ ಆಚರಣೆಯನ್ನು ಮಾಡಲಾಗುವುದು.

ಅಭಿಸೇಚನೀಯಾ ರಾಜಸೂಯದ ಮುಖ್ಯ ಆಚರಣೆ. ರಾಜ ಇದರ ದೀಕ್ಷೆಯನ್ನು ಚೈತ್ರಮಾಸದ ಮೊದಲನೆಯ ದಿನ ಸ್ವೀಕರಿಸುವನು. ಇದು ಐದು ದಿನಗಳ ಕಾಲ ನಡೆಯುತ್ತದೆ. ಅಭಿಸೇಚನೀಯಾ ಯಾಗ ಮಾಡುವ ಸ್ಥಳದ ದಕ್ಷಿಣ ಭಾಗದಲ್ಲಿ ನಡೆಯುವುದು. ಉತ್ತರ ಭಾಗದಲ್ಲಿ ದಸಪೆಯ ವ್ರತವನ್ನು ಮಾಡುವರು. ಈ ವ್ರತವನ್ನು ಮಾಡಿಸುವ ಶ್ರೋತ್ರಿಗಳು ಭೃಗುಗೋತ್ರದವರಾಗಿರಬೇಕು. ಅಭಿಸೇಚನೀಯಾದಲ್ಲಿ ಉಕ್ತ್ಯಾವನ್ನು ಅನುಸರಿಸುವರು. ಇದರ ಅನಂತರ ದೇವಸ್ಸುಹವಿಂಸಿಯನ್ನು ಮಾಡುವರು. ಇದರಲ್ಲಿ ರಾಜನು ಸವಿತೃ, ಅಗ್ನಿ, ಗ್ರಹಪತಿ, ಸೋಮ, ವನಸ್ಪತಿ, ಬೃಹಸ್ವತಿ, ಇಂದ್ರ, ರುದ್ರ, ಮಿತ್ರ, ವರುಣ-ಈ ಹತ್ತು ದೇವತೆಗಳಲ್ಲಿ ನಿವೇದನೆ ಅರ್ಪಿಸುವನು. ಅನಂತರದಲ್ಲಿ ಬ್ರಹ್ಮಪುರೋಹಿತ ರತ್ನೀಸ್ ಎಂಬ ಆಚರಣೆಯನ್ನು ಮಾಡುವನು. ಆಗ ರಾಜ ತನ್ನ ಪ್ರಜೆಗಳನ್ನು ಆಹ್ವಾನಿಸುವನು. ಈ ಸಂದರ್ಭದಲ್ಲಿ ಹದಿನೇಳು ಕಡೆಗಳಿಂದ ನೀರು ಸಂಗ್ರಹಿಸಿ ನಾಲ್ಕು ಮರದ ಪಾತ್ರೆಗಳಲ್ಲಿ ಇಡುವರು. ಈ ಪಾತ್ರೆಗಳನ್ನು ಪಲಾಸ, ಉದುಂಬರ, ನಯಗ್ರೋಧ ಮತ್ತು ಅಶ್ವಸ್ಥ ಮರಗಳಿಂದ ತಯಾರಿಸುತ್ತಾರೆ. ಈ ಪಾತ್ರೆಗಳಲ್ಲಿರುವ ನೀರನ್ನು ಯಾಗ ಮಾಡುವ ರಾಜನ ಮೇಲೆ ಪ್ರೋಕ್ಷಿಸಲಾಗುವುದು. ಮುಖ್ಯಪುರೋಹಿತ ಪಲಾಸಪಾತ್ರೆಯ ನೀರನ್ನು ಪ್ರೋಕ್ಷಣೆ ಮಾಡಿದರೆ, ಬ್ರಹ್ಮ ಪುರೋಹಿತ ಉದುಂಬರಪಾತ್ರೆಯ ನೀರನ್ನು ಪ್ರೋಕ್ಷಣೆ ಮಾಡುವನು. ಇದರ ಅನಂತರ ಇದೇ ಕ್ರಮದಲ್ಲಿ ಇದೇ ಪಾತ್ರೆಯ ನೀರನ್ನು ರಾಜನ ತಮ್ಮಂದಿರು, ನೆಂಟರು ಮತ್ತು ಗೆಳೆಯರು ಪ್ರೋಕ್ಷಿಸುವರು. ವೈಷ್ಣವರು ಅಶ್ವತ್ಥ ಪಾತ್ರೆಯ ನೀರನ್ನು ಪ್ರೋಕ್ಷಣೆ ಮಾಡುವರು. ಈ ಆಚರಣೆಯ ಅನಂತರದಲ್ಲಿ ರಾಜ ಸಾಂಕೇತಿಕವಾಗಿ ಚದುರಂಗವನ್ನು ಆಡುವ ಪದ್ಧತಿ ಇದೆ. ಈ ಸಂದರ್ಭದಲ್ಲಿ ರಾಜನ ಮಕ್ಕಳು, ನೆಂಟರಿಷ್ಟರು, ಪುರೋಹಿತರು ಮತ್ತು ಶ್ರೋತಿಗಳು ಭಾಗವಹಿಸುವರು. ಇವರಿಗೆ ಗೌರವಾರ್ಥ ರಾಜ ಹಲವಾರು ಹಸುಗಳನ್ನು ದಾನ ನೀಡುವನು. ಅನಂತರದಲ್ಲಿ ಉಳಿದ ಪಾತ್ರೆಗಳ ನೀರೆಲ್ಲವನ್ನೂ ಪಲಾಸಪಾತ್ರೆಗೆ ಸುರಿದು, ಅದನ್ನು ಯಾಗಮಾಡಿದ ರಾಜ ಹಿಡಿದುಕೊಂಡು ತನ್ನ ಮಗನಿಗೆ ನೀಡುವನು. ಹೀಗೆ ಕೊಡುವ ಸಂದರ್ಭದಲ್ಲಿ ಮುಂದೆ ಈ ಬಗೆಯ ಎಲ್ಲ ಕೆಲಸಗಳನ್ನು ಶೌರ್ಯವನ್ನೂ ಮುಂದುವರಿಸಿಕೊಂಡು ಹೋಗು ಎಂದು ರಾಜ ತನ್ನ ಮಗನಿಗೆ ತಿಳಿಸುವನು.
  ಅನಂತರದಲ್ಲಿ ವಾಜಪೆಯ ಮತ್ತು ರಥವಿಮೋಚನಿಯಾ ಎಂಬ ಎರಡು ಹೋಮಗಳನ್ನು ರಾಜ ಮಾಡುವನು. ವಾಜಪೆಯ ಹೋಮದಿಂದ ಆತ ಸಾಮ್ರಾಟನೆಂದು ನಿರ್ಣಯಗೊಳ್ಳುವುದು. ಇದೂ ಮುಖ್ಯವಾದ ಹೋಮ. ರಥವಿಮೋಚನ ನಿಯಾದಲ್ಲಿ ರಾಜ ರಥವೇರಿ ಅಣುಕುಹೋರಾಟ ಮಾಡುವನು. ಆಗ ಯಾಗದಲ್ಲಿ ಪ್ರಸ್ತುತವಿರುವ ರಾಜರು ತಾವು ಸೋತಂತೆ ನಟಿಸಿ ರಾಜನಿಗೆ ತಮ್ಮ ಬಿಲ್ಲುಬಾಣಗಳನ್ನು ಒಪ್ಪಿಸಿ, ಕಾಣಿಕೆ ನೀಡುವರು. ಈ ಸಂದರ್ಭದಲ್ಲಿ ರಾಜನಿಗೆ ಕಾಣಿಕೆ ರೂಪದಲ್ಲಿ ಬಂದ ಐಶ್ವರ್ಯವನ್ನು ಮೂರು ಭಾಗ ಮಾಡಿ ಒಂದು ಭಾಗವನ್ನು ಯಾಗ ಮಾಡಿಸಿ ಪುರೋಹಿತರಿಗೆ ಮತ್ತೊಂದು ಭಾಗವನ್ನು ದಸಪೆಯ ವ್ರತವನ್ನು ಮಾಡಿಸಿದ ಬ್ರಾಹ್ಮಣರಿಗೆ, ಮೂರನೆಯ ಭಾಗವನ್ನು ಗೌರವಾನ್ವಿತ ರಾಜನಿಗೆ ಕಾಣಿಕೆ ರೂಪದಲ್ಲಿ ನೀಡಲಾಗುವದು. ಅನಂತರದ ರಾಜನು ಸಿಂಹಾಸನದ ಮೇಲೆ ಕುಳಿತುಕೊಳ್ಳುವನು. ಬ್ರಹ್ಮಪುರೋಹಿತನು ಷ್ಟೇಯವನ್ನು (ಪ್ರಾಣಿಯೊಂದರ ಮೂಳೆಯಿಂದ ತಯಾರಿಸಿದ ಚದುರಂಗದ ದಾಳಗಳು) ರಾಜನಿಗೆ ನೀಡುವನು. ಈ ಸಂಧರ್ಭದಲ್ಲಿ ರಾಜನ ಸಹೋದರರು, ಸೂತ, ಸ್ತಪತಿ, ಹಳ್ಳಿಯ ಮುಖಂಡ, ರಾಜ್ಯದ ಮುಖ್ಯಸ್ಥ ಎಲ್ಲರೂ ಒಟ್ಟಿಗೆ ಸೇರಿ ಚದುರಂಗ ಆಡುವರು. ಇದರ ಅನಂತರ ರಾಜ ಅವಬೃಥಸ್ನಾನ ಮಾಡುವನು.

  	ದಸಪೆಯ ವ್ರತ ಮುಗಿದು ಅವಭೃಥಸ್ನಾನ ಆದ ಅನಂತರ ಒಂದು ವರ್ಷದವರೆಗೂ ರಾಜ ಕೆಲವು ನಿಯಮಗಳನ್ನು ಪಾಲಿಸಬೇಕು. ವ್ರತ ನಡೆದ ಜಾಗದಲ್ಲಿ ಕೃಷ್ಣಾಜಿನದ ಮೇಲೆ ವರ್ಷವಿಡಿ ಮಲಗಬೇಕು. ಪ್ರತಿನಿತ್ಯ ಹೋಮ ಮಾಡಬೇಕು. ತಲೆಗೂದಲನ್ನು ವರ್ಷದ ವರೆಗೆ ತೆಗೆಯುವಂತಿಲ್ಲ. ಕಾಲಿಗೆ ಪಾದರಕ್ಷೆಯನ್ನು ಧರಿಸುವಂತಿಲ್ಲ. ವರ್ಷ ಮುಗಿದ ಅನಂತರದ ಜೇಷ್ಠ ಮಾಸದ ಹುಣ್ಣಿಮೆಯ ದಿನ ತಲೆಕೂದಲನ್ನು ತೆಗೆಸುವ ಆಚರಣೆಯಿದೆ. ಇದೇ ಕೇಶವಪನಿಯ. ಅನಂತರದ ಯಾಗ ಕೊನೆಗೊಳಿಸಲು ವ್ರ್ಯಸ್ಥಿ-ದ್ವಿರಾತ್ರ ಮತ್ತು ಅತಿರಾತ್ರ ಎಂಬ ಎರಡು ವ್ರತಗಳನ್ನು ಒಂದೊಂದು ತಿಂಗಳ ಅಂತರದಲ್ಲಿ ಮಾಡುವರು. ಈ ವ್ರತಗಳನ್ನು ಕ್ಷಾತ್ರಧೃತಿ ಎಂದು ಕರೆಯುವರು.

  	ರಾಜಸೂಯ ಯಾಗ ಮಾಡಿಸುವ ಪುರೋಹಿತರಿಗೆ ಆಯಾ ಹೋಮಕ್ಕೆ ವ್ರತಕ್ಕೆ ಯುಕ್ತ ದಕ್ಷಿಣೆ ನೀಡಲಾಗುವದು. ಅಭಿಸೇಚನಿಯಾ ವ್ರತ ಮಾಡಿಸುವ ಮೊದಲು ನಾಲ್ಕು ಜನ ಪುರೋಹಿತರಿಗೆ ತಲಾ 32 ಸಾವಿರ ಹಸುಗಳನ್ನೂ ಅನಂತರದ ನಾಲ್ಕು ಜನರಿಗೆ ತಲಾ 16 ಸಾವಿರ ಹಸುಗಳನ್ನೂ ಅನಂತರದ ನಾಲ್ಕು ಜನರಿಗೆ ತಲಾ 8 ಸಾವಿರ ಹಸುಗಳನ್ನೂ ಅನಂತರದ ನಾಲ್ಕು ಜನರಿಗೆ ತಲಾ 4 ಸಾವಿರ ಹಸುಗಳನ್ನೂ ಹೀಗೆ ಒಟ್ಟು 2,40,00 ಹಸುಗಳನ್ನು ದಕ್ಷಿಣೆಯಾಗಿ ನೀಡಲಾಗುತ್ತಿತ್ತೆಂದು ತಿಳಿದುಬರುತ್ತದೆ. ದಸಪೆಯವ್ರತ ಮಾಡಿಸುವ ಹದಿನಾರು ಜನ ಪುರೋಹಿತರಿಗೆ ತಲಾ 1000 ಹಸುಗಳನ್ನು ನೀಡಲಾಗುವುದು. ಜೊತೆಗೆ ಬೇರೆ ಬೇರೆ ದಕ್ಷಿಣೆ ದಾನಗಳಿರುತ್ತವೆ.

  	ರಾಜಸೂಯ ಯಾಗ ಬಲು ಸಾಂಕೇತಿಕವಾಗಿದ್ದು ಇದರಲ್ಲಿ ಜನಪ್ರಿಯ ಚದುರಂಗದಾಟವೂ ಸೇರಿದೆ. ಮಹಾಭಾರತದ ಸಭಾಪೂರ್ವದಲ್ಲಿ ಇದರ ವರ್ಣನೆ ಇದೆ. ಇಲ್ಲಿ ಯಾಗದ ಆಚರಣೆಯ ವಿವರಗಳು ಕಾಣುವುದಿಲ್ಲ. ಯುದ್ಧಕ್ಕೆ ನೇರವಾಗಿ ಹೋಗಿ, ರಾಜರನ್ನು ಸೋಲಿಸಿ ಪರಿಗ್ರಹಿಸುವ ವರ್ಣನೆ ಮಾತ್ರ ಕಂಡುಬರುತ್ತದೆ. ಆದರೆ ಅಶ್ವಮೇಧದಲ್ಲಿ ವ್ರತನಿಷ್ಠ ರಾಜ ಮೊದಲು ಅಶ್ವವನ್ನು ಸಾಂಕೇತಿಕವಾಗಿ ಕಳುಹಿಸುವನು. ಯಾಗದ ಕುದುರೆಯನ್ನು ತಡೆದವನೊಡನೆ ಮಾತ್ರ ಯುದ್ಧ ; ಈ ಯಾಗದಲ್ಲಿ ಸಾವು ನೋವುಗಳು ಕಡಿಮೆ. ಹಾಗಾಗಿ ಅನಂತರದಲ್ಲಿ ರಾಜಸೂಯಕ್ಕಿಂತ ಅಶ್ವಮೇಧ ಹೆಚ್ಚು ಜನಪ್ರಿಯವಾಯಿತೆಂದು ತೋರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ